ಸೋಮನ ಕುಣಿತ
	ಕರ್ನಾಟಕದ ಜನಪದ ನೃತ್ಯಗಳಲ್ಲೊಂದು. ಸೋಮಗಳೆಂದರೆ, ಕೊಂಚ ಉಗ್ರವಾಗಿಯೇ ಕಾಣುವಂಥ ಮುಖಭಾವವುಳ್ಳ ಮುಖವಾಡಗಳು. ಇವಕ್ಕೆ ತಲೆಯ ಭಾಗವಷ್ಟೆ ಅಮಾನುಷಾಕೃತಿಯದು, ಮಿಕ್ಕ ದೇಹಭಾಗವೆಲ್ಲ ಜೀವಂತಮಾನವನಿಂದ ತುಂಬಿಕೊಳ್ಳ ಬೇಕಾಗುತ್ತದೆ. ಕೋರೆಮೀಸೆ, ಕೋರೆದಾಡೆ, ಅಗಲಮುಖ, ನೀಳಮೂಗು, ತಿದ್ದಿದ ಹುಬ್ಬು, ಹಣೆಗೆ ಧರಿಸಿದ ನಾಮಗಳಿಂದ ಕೂಡಿದ ಸೋಮನ ಮುಖ ಭಯಂಕರವಾದರೂ ಸುಂದರವಾಗಿರುತ್ತದೆ. ಇದರ ತಲೆಯ ಭಾಗಕ್ಕೆ ಅಲಂಕೃತವಾದ ತ್ರಿಕೋನಾಕೃತಿಯ ಬೆತ್ತದ ಹೆಣೆಗೆಯ ಸಾಧನ ಎದ್ದು ನಿಂತಿದ್ದು ಇದನ್ನು ಮನುಷ್ಯ ಧರಿಸಿಕೊಂಡು ಕುಣಿಯುವಾಗ ಇದು ಭವ್ಯಾಕೃತಿಯ ಸ್ವರೂಪ ತಂದುಕೊಡುವುದಲ್ಲದೆ ನೋಡುವವರಿಗೆ ಆಕರ್ಷಕವಾಗಿರುತ್ತದೆ. ಸೋಮನನ್ನು ಧರಿಸಿಕೊಂಡು ಕುಣಿಯುವಾತ ಯಾವಾಗಲೂ ಗಂಡಸು.

	ಕುಣಿತದಲ್ಲಿ ಸಾಮಾನ್ಯವಾಗಿ ಎರಡು ಸೋಮಗಳಿರುವುದು ರೂಢಿ. ಒಂದು ಕೆಂಪು ಬಣ್ಣದ ಉಗ್ರಸ್ವರೂಪದ ಕೆಂಚರಾಯ, ಇನ್ನೊಂದು ಹಳದಿ ಬಣ್ಣದ ಕೊಂಚ ಸೌಮ್ಯರೂಪದ ಈರಣ್ಣ. ಕೆಲವು ಕಡೆ ಮೂರು ಸೋಮಗಳಿವೆ. ಈ ಮೂರನೆಯದು ನೀಲವರ್ಣದ್ದಾಗಿದ್ದು ಇದನ್ನು ಕರಿರಾಯ ಎಂದೂ ಕರೆಯುತ್ತಾರೆ. ಕುಣಿಯುವಾಗ ಸಾಮಾನ್ಯವಾಗಿ ದೇವರ ಸೀರೆಯನ್ನು ಲಂಗದಂತೆ ಹೊಲಿದು ಸೊಂಟಕ್ಕೆ ಕಟ್ಟಿಕೊಳ್ಳುವುದು ಪದ್ಧತಿ. ಕೆಲವು ಕಡೆ ಬಿಗಿಶರಾಯಿಗಳನ್ನು ತೊಟ್ಟಿರುವುದು ಇತ್ತೀಚೆಗೆ ಕಾಣಬರುತ್ತದೆ. ಈ ಕುಣಿತ ಮಾಡುವ ವ್ಯಕ್ತಿ ಕೈಗಳಿಗೆ ಬೆಳ್ಳಿಯ ಮುರಿ ಎಂಬ ಆಭರಣವನ್ನೂ ಕಾಲು ಮತ್ತು ಸೊಂಟಗಳಿಗೆ ದಪ್ಪ ಕುದುರೆ ಗೆಜ್ಜೆಗಳನ್ನೂ ಕಟ್ಟಿಕೊಂಡು ಸೋಮನ ಮೂಗಿನ ಹೊಳ್ಳೆಗಳಿರುವ ರಂಧ್ರದ ಮುಖಾಂತರ ನೋಡುತ್ತ, ಹರೆ ದೋಣಿನ ತಾಳಲಯಕ್ಕೆ ತಕ್ಕಂತೆ ತೂಗುತ್ತ ಬಾಗುತ್ತ ಹಿಂದೆಮುಂದೆ ಓಡಾಡುತ್ತ, ಲಾಸ್ಯತಾಂಡವ ನೃತ್ಯ ಮಾಡುತ್ತಿರುತ್ತಾನೆ. ದೇವರ ಪರವಾಗಿ ಹಾಕುವ ಮಣೇವನ್ನುಳಿದು ಇತರ ಮೀಸಲು ತೀರಿಸುವುದು ಇವನ ಕರ್ತವ್ಯ. ದೆವ್ವ, ಪೀಡೆಗಳ ಶಂಕೆಯಿಂದ ಭಕ್ತರನ್ನು ಮುಕ್ತಗೊಳಿಸುವ ಜವಾಬ್ದಾರಿಯೂ ಸೋಮನದೆ. ಸೋಮನ ಕುಣಿತ ನೇಪಾಳ ಹಾಗೂ ಭೂತಾನ ದೇಶಗಳ ದೆವ್ವದ ಕುಣಿತವನ್ನೇ ಬಹುಪಾಲು ಹೋಲುವಂತಿದ್ದರೂ ಇವುಗಳಲ್ಲಿ ಪರಸ್ಪರ ಯಾವುದೇ ಸಂಬಂಧ ಕಂಡುಬರುವುದಿಲ್ಲ.

	ಸೋಮನ ಕುಣಿತವನ್ನು ನೃತ್ಯಕಲೆಯಾಗಿ ಯಾರೂ ಅಭ್ಯಾಸ ಮಾಡಿದಂತಿಲ್ಲ. ಏಕೆಂದರೆ ದೇವರ ಮೆರವಣಿಗೆಯ ಸಂದರ್ಭದಲ್ಲಿ ಮಾತ್ರ ಕುಣಿಯಬೇಕೆಂಬ ನಿಯಮವಿರುವುದರಿಂದ ಈ ಕುಣಿತವಿರುತ್ತದೆ. ಕುಣಿಯುವ ಕಲೆಯ ಅಥವಾ ಕಲಿಕೆಯ ಸಲುವಾಗಿಯೇ ಇತರ ದಿನಗಳಲ್ಲಿ ಯಾರೂ ಸೋಮನನ್ನು ಧರಿಸಿ ಕುಣಿಯುವುದಿಲ್ಲ. ಹಾಗಾಗಿ ಸೋಮನ ಕುಣಿತ ಒಂದು ಧಾರ್ಮಿಕ ವಿಧಿಯಾಗಿ ಮಾತ್ರ ಉಳಿದು ಬಂದಿದೆ.

	ಸೋಮನ ಕುಣಿತ ಪೂಜೆ, ಸೇವೆಗಳಿಗೂ ಶಕ್ತಿಪೂಜೆಗೂ ನಿಕಟಸಂಬಂಧವಿದೆ. ಆದರೆ ಪ್ರತಿಯೊಂದು ಶಕ್ತಿ ದೇವತೆಗೂ ಸೋಮಗಳಿರಲೇಬೇಕೆಂಬ ನಿಯಮವೇನಿಲ್ಲ. ಇದ್ದರೂ ಇವು ಆ ದೇವತೆಯ ಸೌಂದರ್ಯ ಸಂಪತ್ಸಾಧನೆಯ ಅಂಗಗಳು ಮಾತ್ರವಾಗಿರದೆ, ಆಯಾ ದೇವತೆಯ ಅಂಶೀಭೂತ ಗಣಾಚಾರದ ಶಕ್ತಿ ಸಹಚರರಾಗಿರುತ್ತವೆ. ಸೋಮಗಳೆಲ್ಲ ಗಂಡೇ ಆಗಿರುವುದು ದೇವಿಯ ಉಪಾಸನೆ ಹಾಗೂ ಸಂರಕ್ಷಣೆಯ ಜವಾಬ್ದಾರಿ ಅವುಗಳ ಮೇಲಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಆದ್ದರಿಂದಲೇ ಮಾರಿದೇವತೆಗೆ ತೋರುವ ಶ್ರದ್ಧೆ, ಮಾಡುವ ಪೂಜೆಗಳೆಲ್ಲ ಇವಕ್ಕೂ ಸಲ್ಲುತ್ತವೆ.			
	(ಎನ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ